ಅನುಬೋಧೆ

ಯಾವುದಾದರೂ ಗೋಚರವಾದ ವಿಷಯವನ್ನು ಮನೋಗತ ವಿಷಯಗಳೊಡನೆ ಯೋಚಿಸಿ ಅನುಭವಕ್ಕೆ ತಂದುಕೊಂಡು ತಿಳಿದುಕೊಳ್ಳುವುದು (ಅಪರ್‍ಸೆಪ್ಷನ್). ಇದೊಂದು ಹಳೆಯ ಸಿದ್ಧಾಂತ.

ಈ ಪದವನ್ನು ಸುಮಾರು ಮುನ್ನೂರು ವರ್ಷಗಳ ಹಿಂದೆ ಜರ್ಮನಿಯ ತತ್ತ್ವಶಾಸ್ತ್ರಜ್ಞ ಲೀಬ್‍ನಿಟ್ಸ್ (1646-1716) ಉಪಯೋಗಿಸಿದ. ಈತನ ಪ್ರಕಾರ ಪ್ರತ್ಯಕ್ಷಾನುಭವ ಸೃಷ್ಟೀಕರಣ ಮಾಡುವ ವಿಧಾನ. ಅಲ್ಲದೆ ಪ್ರಜ್ಞೆಗೆ ನಿಲುಕದಿರುವ ಅಂಶಗಳು ಒಟ್ಟುಗೂಡಿ ತಿಳಿವಳಿಕೆಗೆ ಬರುವುವು. ಉದಾಹರಣೆಗೆ, ಸಮುದ್ರ ತೀರದಲ್ಲಿ ನಿಂತುಕೊಂಡರೆ ಅಲೆಗಳ ಶಬ್ದ ಕೇಳಿಸುವುದು. ಒಂದೊಂದು ಅಲೆಯೂ ನೀರಿನ ಹನಿಗಳಿಂದ ಕೂಡಿರುವುದು; ಆದರೆ ಒಂದು ಹನಿ ಬೀಳುವುದರಿಂದ ಉಂಟಾದ ಶಬ್ದ ನಮಗೆ ಕೇಳಿಸುವುದಿಲ್ಲ. ಅನೇಕ ಹನಿಗಳು ಕೂಡಿದಾಗಲೆ ಶಬ್ದ ಕೇಳಿಸುವುದು. ಆದ್ದರಿಂದ ಆ ಶಬ್ದ ಅನುಬೋಧೆಯ ಮೂಲಕ ಗೊತ್ತಾಗುವುದು.

ಹರ್ಬಾರ್ಟ್ (1776-1841) ಎಂಬ ಜರ್ಮನ್ ತತ್ತ್ವಜ್ಞ ಲೀಬ್‍ನಿಟ್ಸ್‍ನ ಅನುಬೋಧೆ ಸಿದ್ಧಾಂತವನ್ನು ಮುಂದುವರಿಸಿದ. ಪ್ರತ್ಯಕ್ಷಾನುಭವ ಸ್ಪಷ್ಟೀಕರಣ ಮಾಡುವ ಒಂದು ವಿಧಾನವೆಂದು ಈತನೂ ನಂಬಿದ್ದ. ಮನಸ್ಸಿನಲ್ಲಿನ ಅನೇಕಾನೇಕ ಭಾವಗಳೆಲ್ಲ ಪ್ರಜ್ಞೆಗೆ ಸಿಲುಕುವುದಿಲ್ಲ. ಅನುಬೋಧೆಯ ಮೂಲಕ ಮನಸ್ಸಿನ ಅಂತರಾಳದಲ್ಲಿರುವ ಭಾವ ಮೇಲೆ ಬಂದಾಗ ಮಾತ್ರ ಪ್ರಜ್ಞೆಗೆ ಸಿಲುಕುವುದು. ಅಂದರೆ ಅನುಬೋಧೆಯ ಮೂಲಕ ಪ್ರಜ್ಞಾಮಟ್ಟದ ಕೆಳಗಿರುವ ಭಾವಗಳು ಮೇಲಕ್ಕೆ ಏರುವುವು. ಅಲ್ಲದೆ ಹೊಸ ಭಾವಗಳು ಪ್ರಜ್ಞೆಯಲ್ಲಿರುವ ಭಾವಗಳು ಜೊತೆಯಲ್ಲಿ ಕೂಡಿ ತಿಳಿವಳಿಕೆಗೆ ಬರುವುವು.

ಈತನ ಪ್ರಕಾರ ಮನಸ್ಸಿನ ಒಳಗಿರುವ ಅನೇಕ ಭಾವಗಳಲ್ಲಿ ಕೆಲವು ಮಾತ್ರ ಮೇಲೆ ಬಂದು ತಿಳಿವಳಿಕೆಗೆ ಬರುವುವು. ಇನ್ನುಳಿದವು ತಿಳಿವಳಿಕೆಗೆ ಬಾರದೆ ಕೆಳಗೇ ಇರುವುವು. ಈ ವಿಧಾನದಲ್ಲಿ ಮೂರು ಬಗೆಗಳಿವೆ. 1 ಒಂದು ಭಾವಕ್ಕೂ ಮತ್ತೊಂದು ಭಾವಕ್ಕೂ ಒಂದು ಅನುಭವಕ್ಕೂ ಮತ್ತೊಂದು ಅನುಭವಕ್ಕೂ ವಿರುದ್ಧವಿಲ್ಲದಿದ್ದರೆ, ಅವೆರಡೂ ಒಂದೇ ಸರಣಿಗೆ ಸೇರಿದ್ದರೆ ಅವುಗಳ ಐಕ್ಯವಾಗುವುವು. ಉದಾ : ಕೆಂಪುಬಣ್ಣ ಮತ್ತು ನೀಲಿಬಣ್ಣ ಐಕ್ಯವಾಗಿ ನೇರಿಳೆ ಬಣ್ಣ ಉಂಟಾಗುವುದು. 2 ಎರಡು ಭಾವಗಳಲ್ಲಿ  ವಿರುದ್ಧವಿಲ್ಲದಿದ್ದು ಅವು ಬೇರೆ ಬೇರೆ ಸರಣಿಗಳಿಗೆ ಸೇರಿದ್ದರೆ ಅವು ಒಟ್ಟುಗೂಡಿ ಸಂಮಿಶ್ರವಾಗುವುವು. ಉದಾ: ರೈಲುಗಾಡಿ ಓಡುತ್ತಿರುವಾಗ ದೃಶ್ಯ ಮತ್ತು ಶಬ್ದ ಸಂಮಿಶ್ರವಾಗುವುವು. 3 ಒಂದು ಭಾವಕ್ಕೂ ಮತ್ತೊಂದು ಭಾವಕ್ಕೂ ವಿರೋಧವಿದ್ದರೆ ಒಂದು ಮತ್ತೊಂದನ್ನು ನಿರೋಧಿಸುವುದು ಅಥವಾ ತಡೆಗಟ್ಟುವುದು. ಆದ್ದರಿಂದ ಯಾವ ಭಾವವೂ ಪ್ರಜ್ಞೆಗೆ ಬರುವುದಿಲ್ಲ.

ಹರ್ಬಾರ್ಟ್‍ನ ಅನುಬೋಧತತ್ತ್ವ ವಿದ್ಯಾಭ್ಯಾಸದಲ್ಲಿ ದೊಡ್ಡ ಪರಿಣಾಮವನ್ನುಂಟುಮಾಡಿತು. ಹೊಸ ವಿಷಯವನ್ನು ಮಗುವಿಗಾಗಲಿ. ವಯಸ್ಕರಿಗಾಗಲಿ ತಿಳಿಸಬೇಕಾದರೆ ಅದಕ್ಕೂ ಆ ವ್ಯಕ್ತಿಯ ಅನುಭವಕ್ಕೂ ಒಂದು ಸಂಬಂಧವನ್ನು ಏರ್ಪಡಿಸಿದರೆ ಹೊಸ ವಿಷಯವನ್ನು ಸುಲಭವಾಗಿ ಮತ್ತು ವೇಗವಾಗಿ ಗ್ರಹಿಸುವುದಕ್ಕೆ ಸಾಧ್ಯ. ಇಲ್ಲದಿದ್ದರೆ ಮನಸ್ಸು ಹೊಸವಿಷಯವನ್ನು ಸ್ವೀಕರಿಸದೆ ತಳ್ಳಿಹಾಕಬಹುದು.

ಜರ್ಮನಿಯ ಮನಶ್ಯಾಸ್ತ್ರಜ್ಞ ವುಂಟ್ (1832-1920) ಈ ಸಿದ್ಧಾಂತವನ್ನು ಒಪ್ಪಿಕೊಂಡು ಅದನ್ನು ವೈಜ್ಞಾನಿಕವಾಗಿ ಅಳವಡಿಸಲು ಪ್ರಯತ್ನ ಮಾಡಿದ. ಅನುಬೋಧೆ ನಮ್ಮ ಮನಸ್ಸಿಗೆ ಗೋಚರವಾಗುವ ವಿಷಯ ಎಂದು ತೋರಿಸಿದ. ಪ್ರಜ್ಞೆಯಲ್ಲಿ ಎರಡು ಅಂಶಗಳನ್ನು ಕಾಣಬಹುದು. ಒಂದು ವಿಶಾಲಕ್ಷೇತ್ರ ಮತ್ತೊಂದು ಸ್ಪಷ್ಟವಾಗಿ ಕಾಣುವ ನಾಭಿ. ಪ್ರಜ್ಞೆಯ ನಾಭಿಯಲ್ಲಿರುವ ವಿಷಯವೂ ನಮಗೆ ಗೋಚರವಾಗುವುದು. ಅಂದರೆ ಆ ವಿಷಯದ ಮೇಲೆ ನಮ್ಮ ಗಮನ ಇರುವುದು. ಆದ್ದರಿಂದ ಗಮನದ ಮೂಲಕ ಅನುಬೋಧೆಯನ್ನು ಅಳೆಯಬಹುದು. ಈ ವಿಧವಾಗಿ ಅನುಬೋಧೆ ಪ್ರಾಯೋಗಿಕ ಮಾರ್ಗಕ್ಕೆ ಒಳಪಟ್ಟಿದೆ. ಪ್ರಯೋಗಗಳ ಮೂಲಕ ನಮ್ಮ ಪ್ರಜ್ಞೆಯ ನಾಭಿಯಲ್ಲಿ ಸರಾಸರಿ ಆರು ವಸ್ತುಗಳು ಅಥವಾ ಆರು ಗುಂಪಿಗೆ ಸೇರಿದ ವಸ್ತುಗಳು ಗೋಚರವಾಗುವುವೆಂದು ತಿಳಿದು ಬಂದಿದೆ. ಇದಕ್ಕಿಂತ ಹೆಚ್ಚು ಇದ್ದರೆ ಗ್ರಹಿಸಲು ಸಾಧ್ಯವಿಲ್ಲ. ವುಂಟ್ ಪ್ರತಿಕ್ರಿಯಾ ವೇಳೆಯನ್ನು ಅಳೆದು ನಮ್ಮ ವರ್ತನೆಯ ಅನೇಕ ನಿಯಮಗಳನ್ನು ಕಂಡುಹಿಡಿದ. ಇದರಲ್ಲಿ ಒಂದು ಮುಖ್ಯವಾದ ಅಂಶವೆಂದರೆ, ಸ್ನಾಯುಪ್ರತಿಕ್ರಿಯಾವೇಳೆಗೂ (ಮಸ್ಕ್ಯುಲರ್ ರಿಆ್ಯಕ್ಷನ್ ಟೈಂ) ಇಂದ್ರಿಯಾನುಭವಪ್ರತಿಕ್ರಿಯಾವೇಳೆಗೂ (ಸೆನ್ಸರಿ ರಿಆ್ಯಕ್ಷನ್ ಟೈಂ) ವ್ಯತ್ಯಾಸವಿರುವುದೆಂಬುದು ಸಿದ್ಧವಾಯಿತು. ಇಂದ್ರಿಯಾನುಭವ ಪ್ರತಿಕ್ರಿಯೆ ಸಾಧಾರಣವಾಗಿ ಕ್ಷಣದ ಹತ್ತನೆಯ ಒಂದು ಭಾಗದಷ್ಟು ಸ್ನಾಯು ಪ್ರತಿಕ್ರಿಯಾವೇಳೆಗಿಂತ ಹೆಚ್ಚಾಗಿರುವುದು. ಆದ್ದರಿಂದ ಅನುಬೋಧೆಯ ಕಾಲ ಕ್ಷಣದ ಹತ್ತನೆಯ ಭಾಗದಷ್ಟು ಇರುವುದೆಂದು ವುಂಟ್ ಪ್ರತಿಪಾದಿಸಿದ.
 
ಆದರೆ ಜರ್ಮನಿಯ ಮತ್ತೊಬ್ಬ ಮನಶ್ಯಾಸ್ತ್ರಜ್ಞ ಕುಲ್ಪೆ (1862-1915) ಮತ್ತು ಆತನ ಉರ್ಜ್‍ಬರ್ಗ್ ಸಂಪ್ರದಾಯಕ್ಕೆ ಸೇರಿದ ವೈಜ್ಞಾನಿಕರು ಚಿಂತನೆಯ ಪ್ರಾಯೋಗಿಕ ಮಾರ್ಗವನ್ನು ಅನುಸರಿಸಿ ಅಧ್ಯಯನ ಮಾಡಿದರು. ಇದರ ಫಲವಾಗಿ ವುಂಟನ ಅನುಬೋಧೆಯ ವಾದಕ್ಕೆ ಆಧಾರವಿಲ್ಲವೆಂಬುದನ್ನು ತೋರಿಸಿಕೊಟ್ಟರು. ಆದ್ದರಿಂದ ಈಗ ಸುಮಾರು ಅರುವತ್ತು ವರ್ಷಗಳಿಂದ ಅನುಬೋಧಸಿದ್ಧಾಂತವನ್ನು ಆಧುನಿಕ ಮನಶ್ಯಾಸ್ತ್ರಜ್ಞರು ಉಪಯೋಗಿಸುವುದಿಲ್ಲ.					
(ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ